ಈಮ್ಯೂ ಹಕ್ಕಿ -
ಕಾಜû್ಯುಎರೈಫಾರ್ಮೀಸ್ ಗಣದ (ಆರ್ಡರ್), ಡ್ರಾಮಿಸಿಯೈಡೀ ಕುಟುಂಬದ (ಫ್ಯಾಮಿಲಿ), ಡ್ರೋಮೇಯಸ್ ಜಾತಿಯ (ಜೀನಸ್), ಸರಿಸುಮಾರಾಗಿ ಉಷ್ಟ್ರಪಕ್ಷಿಯನ್ನು ಹೋಲುವ, ಆಸ್ಟ್ರೇಲಿಯಾದ, ಹಾರಲಾರದ ಪಕ್ಷಿ. ಉಷ್ಟ್ರಪಕ್ಷಿಗೂ ಇದಕ್ಕೂ ಸಂಬಂಧವೇನೂ ಇಲ್ಲ. ಅಲ್ಪ ದೂರಗಳನ್ನೂ ಗಂಟೆಗೆ 30-40 ಮೈಲಿ ವೇಗದಿಂದ ಧಾವಿಸಬಲ್ಲದು; 5-6 ಎತ್ತರದ ಅಡಚಣೆಗಳನ್ನು ನೆಗೆದು ದಾಟಬಲ್ಲದು: ಈಜುವ ಸಾಮಥ್ರ್ಯವೂ ಇದೆ. ನಶಿಸಿ ಹೋದ ರೆಕ್ಕೆಗಳು, ನೀಳ ಮತ್ತು ಎರಡು ಸೀಳಾದ ಮೈಗರಿಗಳು, ಉರುಟಾದ ತಲೆ, ಉರುಟು ಕೊನೆಯ ಕಿರಿಯ ಕೊಕ್ಕು, ಒಂದೊಂದು ಕಾಲಿನಲ್ಲೂ ಉಗುರುಗಳಿಂದ ಕೂಡಿದ ಮೂರು ಬೆರಳುಗಳಿರುವ ಉದ್ದ ಮತ್ತು ಬಲಿಷ್ಠವಾದ ಕಾಲುಗಳು—ಇವು ಈಮ್ಯೂವಿನ ವೈಶಿಷ್ಟ್ಯಗಳು. ಪಕ್ಷಿಯ ಗಾತ್ರಕ್ಕೆ ಹೋಲಿಸಿವಾಗ ಅದರ ಕಾಲುಗಳು ಚಿಕ್ಕವು. ವಾಸ ಹೊರವಲಯದಲ್ಲಿ. ಆಹಾರ ಹಣ್ಣು, ಹಂಪಲು, ಚಿಗುರು, ಬೇರು, ಗೆಡ್ಡೆ ಮುಂತಾದುವು. ಸಂಚಾರ ಚಿಕ್ಕ ಚಿಕ್ಕ ಗುಂಪಿನಲ್ಲಿ. ಹೆಣ್ಣು ಹಕ್ಕಿ ನೆಲದ ತಗ್ಗು ಮತ್ತು ಗುಪ್ತಪ್ರದೇಶಗಳಲ್ಲಿ ಮೊಟ್ಟೆಯಿಟ್ಟು ರಕ್ಷಿಸುತ್ತದೆ. ಒಂದು ಸಲಕ್ಕೆ 12ರ ವರೆಗೆ ನೀಲಿ-ಹಸುರು ಬಣ್ಣದ ಮೊಟ್ಟೆ ಇಡುವುದು. ಮೊದಲ ಹಂತದಲ್ಲಿ ಗಂಡು ಹಕ್ಕಿ ಮೊಟ್ಟೆಗಳಿಗೆ ಕಾವು ಕೊಡುವುದು; ಎರಡನೆಯ ಹಂತದಲ್ಲಿ ಹೆಣ್ಣು ಹಕ್ಕಿ ಈ ಹೊಣೆ ಹೊರುತ್ತದೆ. ಕಾವಿನ ಅವಧಿ ಎರಡು ತಿಂಗಳ ಕಾಲ. ಸಾಮಾನ್ಯವಾಗಿ ಗಂಡು ಏಕಪತ್ನೀವ್ರತಸ್ಥ. ಗರಿಗಳು ನೋಡಲು ಅಂದವಾಗಿವೆಯಾಗಿ ಅವನ್ನು ಪಾಶ್ಚಾತ್ಯರು ಅಲಂಕರಣ ಸಾಮಗ್ರಿಯಾಗಿ ಉಪಯೋಗಿಸುತ್ತಾರೆ. ಈಗಲೂ ಗರಿಗಳಿಗಾಗಿ ಹೆಚ್ಚಿನ ಬೇಡಿಕೆ ಇದೆ. ಇದರ ಮಾಂಸ ಮತ್ತು ಕೊಬ್ಬು ಆಹಾರ ಪದಾರ್ಥಗಳೂ ಹೌದು. 
  (ಜಿ.ಎಂ.ಬಿ.) 
(ಪರಿಷ್ಕರಣೆ: ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ